ಒಬ್ಬನ ವೈದ್ಯಕೀಯ ಖರ್ಚುಗಳನ್ನು ವಹಿಸಿಕೊಳ್ಳಲು ಮುಂಚೆಯೇ ಮಾಡಿಕೊಂಡಿರುವ ಏರ್ಪಾಡು. ವಿಮೆಯ ಪತ್ರದಲ್ಲೋ ಕಾಯಿದೆಯಲ್ಲೋ ಸೂಚಿಸಿರುವಂತೆ, ಆರೋಗ್ಯ ಸೇವೆಯ ಪುರ್ತಿ ಇಲ್ಲವೇ ಒಂದು ಪಾಲಿನ ಖರ್ಚು ವಹಿಸುವ ಕೊಡುಗೆಗಳೋ ತೆರಿಗೆಯೋ ಆರೋಗ್ಯವಿಮೆಯ ಅಡಿಗಲ್ಲು. ವಿಮೆ ಮುಂಗಡ ಹಣ, ತೆರಿಗೆಗಳ ಮುಂಚಿನ ಸಲ್ಲಿಕೆ, ನಿಧಿಗಳ ಕೂಡಿಕೆ, ವೈದ್ಯರ ಪಾಲನೆ ದೊರೆಯಲು ದುಡ್ಡಿನ ಕೊರತೆಗಳನ್ನು ಪುರ್ತಿಯಾಗೋ, ಪಾಲಾಗೋ ನೀಗುವುದು, ಕೊಡುಗೆಗಳ ಆಧಾರದ ಮೇಲೆ ಅನುಕೂಲಗಳನ್ನು ಪಡೆದ ಹಕ್ಕು, ಇಲ್ಲವೇ ಯೋಗ್ಯತೆ ಅಳೆಯದೆ ಉದ್ಯೋಗ ಒದಗಿಸುವುದು. ಇವೇ ಆರೋಗ್ಯ ವಿಮೆಯ ಮುಖ್ಯ ವಿಶೇಷಗಳು. ಬೇನೆ ಬಿದ್ದೋ ಪೆಟ್ಟುಗಾಯಗಳಿಂದ ಊನವಾಗೋ ಸಂಪಾದನೆ ನಿಂತುಹೋದಾಗ ದುಡ್ಡಿನ ನೆರವೂ ಆರೋಗ್ಯವಿಮೆಯಲ್ಲಿ ಸೇರಿರುವುದು. ಈ ತೆರನಾಗಿ ಸಂಪಾದನೆ ತಪ್ಪಿದಾಗ ನೆರವಾಗಲು ಅಮೆರಿಕದಲ್ಲಿ ಸರ್ಕಾರವೂ ಜನರ ಸಂಸ್ಥೆಗಳೂ ಇವೆ. ಆದರೂ ಸಂಪಾದನೆ ಕಡಿತವನ್ನೂ ಆರೋಗ್ಯ ಸೇವೆಗಳನ್ನೂ ಬೇರೆ ಬೇರೆಯಾಗಿ ಪರಿಗಣಿಸುವುದೇ ಹೆಚ್ಚಾಗಿ ರೂಢಿಯಲ್ಲಿ ಬರುತ್ತಿದೆ. ಇಎಸ್ಐಎಸ್ ಮತ್ತು ಸಿಜಿಎಚ್ಎಸ್‍ಗಳು ಆರೋಗ್ಯವಿಮೆಗೆ ಒಳ್ಳೆಯ ಉದಾಹರಣೆಗಳು.    

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ